ರಾಮಗಿರಿ
ಕರ್ನಾಟಕ ರಾಜ್ಯದ ಬೆಂಗಳೂರು ಜಿಲ್ಲೆಯ ರಾಮನಗರ ತಾಲ್ಲೂಕು ಮತ್ತು ಹೋಬಳಿಗೆ ಸೇರಿದ್ದು, ರಾಮನಗರದಿಂದ ಉತ್ತರಕ್ಕೆ 5 ಕಿಮೀ ದೂರದಲ್ಲಿ, ಅರ್ಕಾವತಿ ನದಿಯ ಎಡಪಕ್ಕದಲ್ಲಿ ಇರುವ ಒಂದು ದೊಡ್ಡ ಬೆಟ್ಟ.   ಹಿಂದೆ ಈ ಬೆಟ್ಟದ ಮೇಲೆ ಒಂದು ಕೋಟೆಯೂ ಬೆಟ್ಟದ ಬುಡದಲ್ಲಿ ರಾಮಗಿರಿ ಪಟ್ಟಣವೂ ಇದ್ದು ಈ ಊರಿನ ಹೆಸರೇ ತಾಲ್ಲೂಕಿಗೂ ಇತ್ತು.  ಕ್ಲೋಸ್‍ಪೇಟೆ (ಇಂದಿನ ರಾಮನಗರ) ಸ್ಥಾಪಿತವಾದ ಮೇಲೆ ಇಲ್ಲಿನ ಜನವಸತಿ ಸ್ಥಳಾಂತರಗೊಂಡುದರಿಂದ ಈ ಊರು ಬೇಚಿರಾಗ್ ಆಯಿತು.  ಈ ಬೆಟ್ಟದ ಬಳಿಯಲ್ಲಿ ಕಬ್ಬಿಣ ದೊರೆಯುತ್ತಿದ್ದುದರಿಂದ ಹಿಂದೆ ಕತ್ತಿ, ಗುರಾಣಿ, ಈಟಿ, ಬರ್ಜಿ ಮೊದಲಾದ ಆಯುಧಗಳನ್ನು ತಯಾರಿಸುತ್ತಿದ್ದರು.  1791 ರಲ್ಲಿ ವೆಲ್ಷ್ ಎಂಬ ಬ್ರಿಟಿಷ್ ಸೇನಾನಿ ಈ ಕೋಟೆಯನ್ನು ವಶಪಡಿಸಿಕೊಂಡಿದ್ದ.  ಈ ಬೆಟ್ಟವನ್ನು  ಏರಲು ಹಳ್ಳಿಮಾಳದ ಕಡೆಯಿಂದ ಹಾದಿ ಇದೆ.  ಬೆಟ್ಟದ ಮೇಲಿನ ಕೋಟೆ ವಿಸ್ತಾರ ಪ್ರದೇಶ ಹೊಂದಿದ್ದು, ಒಂದು ಕಾಲದಲ್ಲಿ ಭದ್ರವಾದ ಠಾಣ್ಯವಾಗಿತ್ತು.  ಕೋಟೆಗೆ ಕಲ್ಲಿನಿಂದ ಕಟ್ಟಿದ ಮೂರು ಬಾಗಿಲುಗಳಿವೆ.  ಕೆಂಪೇಗೌಡನ ಕಾಲದಲ್ಲಿ ಈ ಕೋಟೆ ಅವನ ಒಂದು ನೆಲೆಯಾಗಿದ್ದಿತೆಂದೂ ಇಲ್ಲಿ ಶಸ್ತ್ರಾಸ್ತ್ರ ಮದ್ದುಗುಂಡುಗಳನ್ನು ತಯಾರಿಸುತ್ತಿದ್ದರೆಂದೂ ಕೋಟೆಯ ಕಾರ್ಖಾನೆ ಬಂಡೆ ಎಂಬ ಶಿಲೆಯ ಮೇಲಿರುವ ಶಾಸನದಿಂದ ತಿಳಿದು ಬರುತ್ತದೆ.  ಈ ಬೆಟ್ಟದಲ್ಲಿ ರಾಮದೇವರ ಮತ್ತು ರಾಮೇಶ್ವರ ದೇವರ ಗುಡಿಗಳಿವೆ.  ರಾಮದೇವರ ಗುಡಿಯ  ರಂಗಮಂಟಪವನ್ನು ಕೆಂಪೇಗೌಡ ಕಟ್ಟಸಿದನೆಂದು ತಿಳಿದುಬರುತ್ತದೆ.  ಈ ಗುಡಿಯ ಹತ್ತಿರದಲ್ಲಿ ಒಂದು ಚಿಲುಮೆಯಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ